Thursday, March 10, 2011

ಸಾಗರದ ಅಲೆಯಲ್ಲಿ ನನ್ನವಳ ಕಂಡ ಕನಸು....!

ಕಲ್ಪನೆಯ ಮೋಡದಲ್ಲಿ

ಸುಂದರ ಬಾಲ ಬಾಲ್ಯದಲ್ಲಿ ಈಸಿದ್ದೇನು? ಈಸಿ ಜಯಿಸಿದ್ದೇನು? ಬರೀ ನಾಟಕೀಯ ತುಣುಕುಗಳ ನೆನಪಷ್ಟೆ! ಪ್ರೀತಿಯಿಂದ ಹಡೆದಳು ನಮ್ಮವ್ವ, ಜೋಗುಳ, ಕಂದಮ್ಮ, ಇಂತೆಲ್ಲ ಕವನ ಕಾದಂಬರಿಗಳಿಂದ ಬಾಲ್ಯವನ್ನು ಮುದ್ದಿಸಿದ್ದೆಷ್ಟೋ ಅರಿಯೆ! ಮಗು ನಕ್ಕಾಗ,ಕೆನ್ನೆ ಕೆಂಪಿದ್ದಾಗ, ಮೆಲ್ಲನೆ ಅಮ್ಮಾ ಎಂದು ಮೆಲ್ಲಿದಾಗ ಅಮ್ಮನ ಆನಂದವೆಷ್ಟೋ ವರ್ಣಿಸಲಾಗದು, ಸ್ವಲ್ಪ ತುಂಟಾಟಿಕೆ ಮಿತಿ ಮೀರಿದಾಗ ಆಕೆ ಪ್ರೀತಿಯಿಂದ ಅಬ್ಬರಿಸುವುದರಲ್ಲಿ ತಪ್ಪೇನಿದೆ ಅಲ್ವೇ..? ಆದರೊ ಆ ಪ್ರೀತಿಯ ಹೊಡೆತವನ್ನು ಪ್ರೀತಿಯಿಂದಲೇ ಸಹಿಸುವವರಾರು? ಮೀಸೆ ಬಂದಾಗ ಲೋಕ ಕಾಣುವುದಿಲ್ಲ ಅನ್ನೋದು ಸುಳ್ಳಲ್ಲ ಅಲ್ಲವೇ? ಅಮ್ಮ ಮುದ್ದಿಸಿದ್ದು, ಅಮ್ಮನ ಮುತ್ತನ್ನು ಮರೆತಿದ್ದು ಇದೆಲ್ಲಾ ಮಾನವ ಹೆಚ್ಚು ಸುಖವನ್ನು ಪಡೆಯಲು ಹೊರಟಾಗ ಅವನ ಮನದಲ್ಲಿ ಮೊಡುವ ಕನಸಿನ ಕಾದಂಬರಿ. ಅಮ್ಮನಿಂದ ಕೈ ತುತ್ತು ತಿನ್ನುವ ಹೊತ್ತು ಕಳೆದರೆ ಸಾಕು ದೇಶ ಸುತ್ತಿ ಕೋಶ ಓದುವ ಬಯಕೆ, ಕಣ್ಣು ಮನಸ್ಸು ಇಷ್ಟ ಪಟ್ಟಿದ್ದನ್ನು ಕೊಂಡುಕೊಳ್ಳುವ ಆಸೆ, ನನ್ನವಳ ಬಗ್ಗೆ ನೆನೆದಾಗ ಹೆಣ್ಣು ತಪ್ಪಿಲ್ಲ, ತಪ್ಪು ಎನ್ನುವ ದಾರವನ್ನು ಗಂಡು ಹೆಣೆದಿಲ್ಲ, ಎಲ್ಲವನ್ನೊ ಕಾಲ ಸಂದರ್ಭಗಳೆಂಬ ಸಹಜತೆ ಅಲ್ಲೋಲ ಕಲ್ಲೋಲವಾಗಿಸಿದ್ದು ಅನಿಸುತ್ತಿದೆ!

ನನ್ನವಳು ಅಂತಹ ಹಾಲು ವಯಸ್ಸಿನಲ್ಲೂ ಮುಂಜಾನೆ ಎದ್ದು, ಸಂಧ್ಯಾವಂದನೆ ಮುಗಿಸಿ,ನಮಿಸಿ, ಸುಂದರ ಕನಸುಗಳ ತಂತಿಯನ್ನು ಮೀಟಿ ಆನಂದಿಸುತ್ತಿದ್ದಳು, ಮುಂಜಾನೆಯ ಸವಿ ತಂಗಾಳಿ ಮೈಗೆ ಸೋಕುವುದನ್ನು ಅನುಭವಿಸುತ್ತಾ ಆನುಭವವನ್ನು ಅಮ್ಮನಲ್ಲಿ ಹಂಚುತ್ತಾ, ಕಮಲದಿಂದ ದುಂಬಿ ಮಕರಂದವನ್ನು ಹೀರುವ ಸೊಬಗನ್ನು ಮನದಲ್ಲೇ ಹಾಡುತ್ತಿದ್ದಳು. ಅವಳಿಗೊ ದುಂಬಿಯಾಗುವ ಬಯಕೆಯಂತೆ, ಸಂಜೆಯ ಕೆಂಪುಬಣ್ಣದ ಆಗಸದ ತೇರಿನಲ್ಲಿ ಸಾಲು ಸಾಲಾಗಿ ಹಾರುವ ಹಕ್ಕಿಗಳ ದಿಂಡನ್ನು ನೋಡು ನೋಡುತ್ತಾ, ನನಗೊ ಹಕ್ಕಿಯಾಗಬಾರದಿತ್ತೇ?, ನಾನು ಅವುಗಳ ಜೊತೆ ಹಾರಬಾರದಿತ್ತೆ ಅನ್ನೋ ಕನಸುಗಳನ್ನು ಬಿತ್ತುತ್ತಿದ್ದಳು. ಹೀಗಿದ್ದ ನನ್ನಾಕೆ ಮೊದಲು ಮರೆತಿದ್ದು ಅಮ್ಮನನ್ನು! ನಂತರ ಮರೆತಿದ್ದು ನನ್ನನ್ನು!

ಪ್ರೀತಿಯ ಮಹಲ್ ಕಟ್ಟಲು ಎಷ್ಟೋ ವರ್ಷಗಳು ಬೇಕು,ಅದೇ ಮಹಲ್ ಒಡೆದು ಹೋಗಲು ಒಂದು ನಿಮಿಷ ಸಾಕು! ಪ್ರೀತಿ ಹುಟ್ಟು ಹಾಕಲು ಕೆಲವೇ ಕವಲುಗಳಿದ್ದರೆ, ಒಡೆದು ಹೋಗಲು ನೊರಾರು ಕವಲುಗಳು ! ಹಾಗೆಂದು ನಾ ಕಟ್ಟಿದ ಪ್ರೀತಿಯ ಸೌಧ ಯಾರೋ,ಹೇಗೋ ಎಂಬ ಒತ್ತಾಯಕ್ಕೆ ರಚನೆಯಾಗಿಲ್ಲ, ಅಲ್ಲಿ ಸುಂದರ ಭಾವನೆಗಳಿತ್ತು,ಸುಂದರ ಕನಸುಗಳಿತ್ತು,ಬಾಲ್ಯದ ಬದುಕಿನ ನೆನಪುಗಳಿತ್ತು,ಪುಟ್ಟ ಪುಟ್ಟ ಹೆಜ್ಜೆಯ ಗುರುತುಗಳಿತ್ತು! ನನ್ನವಳು ನೆಲ ಸೋಕುವ ದಾವಣಿಯ ಅಂಚನ್ನು ಎತ್ತಿ ಹಿಡಿದು ಕುಂಟೆ ಬಿಲ್ಲೆ ಆಡುವಾಗ ಎಡವಿ ಬಿದ್ದಳು, ನಾನು ಅಡಿಕೆ ಗರಿಯಲ್ಲಿ ಎಳೆದಾಗ ಜಾರಿ ಬಿದ್ದಳು, ನೆಲ್ಲಿ ಕಾಯಿ ಕೀಳುವಾಗ ಕೆಳಬಿದ್ದಳು, ಎಲ್ಲಿ, ಹೇಗೆ ಬಿದ್ದರೊ ಸಹಿಸಲಾಗದ ನೋವಾಗಿತ್ತು! ಇನ್ನು ನನ್ನಾಕೆ ತನ್ನ ಹರೆಯದ ಬದುಕಲ್ಲೇ ಎಡವಿದಾಗ, ಬಾಲ್ಯದ ನಂತರವೊ ಪರರೊಡನೆ ಬೆತ್ತಲಾದಾಗ ನಾನೇಕೆ ಮೌನವಾದೆ? ನನ್ನ ನಯನಗಳೇಕೆ ಕಣ್ಣೀರನ್ನು ಹರಿಯ ಬಿಡಲಿಲ್ಲ,ದೇಹವೇಕೆ ಕಲ್ಲಾಯಿತು? ಆಕೆ ಆ ರೀತಿ ವರ್ತಿಸುವ ಕಾರಣವಾದರೊ ಏನು? ನಾನು ನನ್ನ ಕನಸುಗಳು ಸುಳ್ಳೆ? ಭಾವನೆಗಳು ಸುಳ್ಳೆ? ನನ್ನವಳು ನನಗಾಗಿ ಸುರಿದ ಪ್ರೀತಿ ತುಂಬಿದ ಕಣ್ಣೀರು ಸುಳ್ಳೆ?

ಬಾಳ ಮೊದಲ ಬೇಟಿಯಲ್ಲಿ ನನ್ನವಳನ್ನು ಪ್ರೀತಿಯ ಮಂದಿರದಲ್ಲಿ ಕಂಡೆ, ಬಾಳ ಮಗದೊಂದು ಭೇಟಿಯಲ್ಲಿ ನನ್ನವಳನ್ನು ಕಂಡಾಗ ಆಕೆಯ ಕಣ್ಣುಗಳು ಬಾಡಿತ್ತು,ತುಟಿ ಒಣಗಿತ್ತು, ಗಲ್ಲ ನಗುವಿನ ಗಾಳಿ ಸೋಕದೆ ಕುಂದಿತ್ತು ಅಂದರೆ ಅದಾಗಲೇ ಆಕೆಯ ದೇಹವೆಂಬ ಆಸ್ತಿಯ ಪತ್ರ ಮತ್ತೊಬ್ಬರದ್ದಾಗಿತ್ತು, ಮತ್ತೆ ನನ್ನವಳ ಭೇಟಿ ಎಲ್ಲಿ ಹೇಗಾಗುತ್ತೋ ತಿಳಿದಿರಲಿಲ್ಲ.ಆದರೊ ಎದೆಯೊಳಗಿನ ಪ್ರೀತಿ ಕುಂದಲೇ ಇಲ್ಲ,
ಮುಂದೇನಾಯಿತು? ಪ್ರೀತಿ ಬೇಡವೆನಿಸಿತೇ? ಬದುಕು ಸಾಕೆನಿಸಿತೇ? ನಾನು ಎಲ್ಲವನ್ನೊ ಸಹಿಸಲು ಉಸಿರುಹಿಡಿಯುವ ಪ್ರಯತ್ನದಲ್ಲಿದ್ದಾಗ ಎಲ್ಲಾ ನೋವು,ದುಗುಡ,ದುಮ್ಮಾನಗಳನ್ನು ಕಾಲವೆಂಬ ಕವಡೆ ಮಗುಚಿ ಹಾಕಿತ್ತು, ಕೆಲವೊಂದು ಆಕಸ್ಮಿಕ ಅನುಭವಗಳಿಂದ ಸಮುದ್ರದ ಅಲೆಗಳು ಪ್ರತೀ ನಿಮಿಷಕ್ಕೊ ದಡವನ್ನು ತಟ್ಟುವ ಕಾರಣದ ಅನುಭವವಾಯಿತು. ದಿನಗಳು ಉರುಳಿತ್ತು, ಕತ್ತಲೆಯ ಕಾವಿನಲ್ಲಿ ಒಂದೊಮ್ಮೆ ಮೈ ಬೆವರಿತ್ತು, ನೆನಪುಗಳು ಚುಚ್ಚುವಾಗ ಮತ್ತೆ ಮತ್ತೆಗೆ ಅದೇನೊ ಹೊಸತೆನಿಸಲಿಲ್ಲ ಎಲ್ಲವೊ ಅಭ್ಯಾಸ ಅನ್ನುವ ತಾಳಕ್ಕೆ ಕುಣಿಯುವ ಗೊಂಬೆಯಾಯಿತು.ಸಹೋದರಿಯೊ ನನ್ನ ಮುರುಕಲು ಮನಕ್ಕೆ ಬುದ್ದಿಮಾತುಗಳನ್ನು ಚಡಪಡಿಸುತ್ತಾ ಕೆಂಪಾಗಿದ್ದಳು,

ಅದೊಂದು ದಿನ ಸಾಗರದ ಅಂಚಿನಲ್ಲಿ ಕೂತಾಗ ಬಾನಂಚಿನಲ್ಲಿ ಸುಂದರ ಸಂಜೆಯ ಕಂಪನ್ನು ಸವಿಯುತ್ತಾ, ಮೋಡಗಳು ಬಾನನ್ನು ತಬ್ಬಿ ಆಲಂಗಿಸಿದಾಗ, ಅಲೆಗಳು ನನ್ನ ಪಾದದ ವರೆಗೊ ಬಂದು ಹಿಂದೆ ಸರಿದಾಗ ನನ್ನವಳ ನೆನಪಾಗದಿರಲಿಲ್ಲ ಬಾಳಿನಲ್ಲಿ ಎರಡು ಬೇಟಿಗಳನ್ನೊ ಮುಗಿಸಿ ಮೊರನೆಯದೆಂತೋ ಎಂದು ದಡಕ್ಕೆ ಬಾಗಿದಾಗ, ಅಲ್ಲಿದ್ದ ಕೆಲವೊಬ್ಬರು ಸಾಗರ ತೀರದಲ್ಲಿ ಗುಂಪಾಗಿದ್ದರು, ಸಹೋದರಿಯೊ ಕೊಡಾ ಯಾರೋ ನಮಗೇಕೆ? ಶುದ್ದ ಮನಸ್ಸುಗಳ ಪ್ರೀತಿಗೆ ಅಂತ್ಯ ಈ ರೀತಿಯೇ ಕಹಿಯಾಗಿರುತ್ತದೆ! ಯಾವುದೋ ಹುಡುಗಿ ಕನಸುಗಳೆಂಬ ನೀರಿನ ಹಾಸಿಗೆಯಲ್ಲಿ ತೇಲುತ್ತಿದ್ದಾಳೆ ಅಂದಳು, ಎಲ್ಲರ ಕೈಗಳೊ ಕೂಡಾ ಕೊಳೆತ ಗಂಧಕ್ಕೆ ನಾಸಿಕವನ್ನು ಮುಚ್ಚಿಸಿತ್ತು,,! ನಾ ಮೆಲ್ಲನೆ ನಡೆದು ತಲೆಯೆತ್ತಿದಾಗ.......
ಸಹೋದರಿಯ ಅದು ನಿನ್ನವಳಲ್ಲ ಅನ್ನೊ ಮಾತಿಗೆ ಎನ್ನ ಮನದ ಪ್ರೀತಿಯ ಮಂದಿರ ಅದು ಎನ್ನವಳೇ ಎಂದು ಸಾರಿ ಸಾರಿ ಹೇಳಿತ್ತು, ಕಾಲ ಉರುಳಿತ್ತು,ಬಾಳು ಮುಗಿದಿತ್ತು, ಅಂದಲ್ಲಿ ಬಾಳು ಬೆತ್ತಲೆ ನಡಿಗೆ, ಸಂಜೆ ಕತ್ತಲೆಡೆಗೆ....

ಲೋಕು ಕುಡ್ಲ..

(lokukudla@gmail.com)
* * * *