Saturday, June 25, 2011

ಈ ಭುವಿಗೆ ಧನ್ಯವಾದ...

ಹಬ್ಬಿದ ಹುಬ್ಬು ನಯನಕೆ ಸೌಂದರ್ಯದ ಬೇಲಿ
ಮಾಧುರ್ಯದ ಚೈತನ್ಯ ಮನಕೆ ಪುಷ್ಪದ ಗಾಳಿ
ಪಚ್ಚೆ ಪಸಿರು ನಿಸರ್ಗ ಮಾನವ ಮನಕೆ ಸಾಂತ್ವನ
ಎತ್ತಣಿಂದೆತ್ತವೋ ಹಸಿರು-ಉಸಿರಿನ ಈ ಬಂದನ

ಕನಕಾಂಬರದಲಿ ಇಬ್ಬನಿಯ ಸೊಬಗು
ಅತ್ತಿಂದಿತ್ತ ತರಗೆಲೆಯ ನರ್ತನ
ತಿರುಗು ದಾರಿಗಳ ಸ್ನೇಹ ಅವಲಂಬನ
ಸೌಂದರ್ಯ ಚಿಲುಮೆಯೊಳಗಿನ ಈ ಚಂದನ ವನ

ಗಿರಿ ಶಿಖರಗಳ ಕಂಪು ತಂಪಿನ ಚುಂಬನದಲಿ
ಹಸಿರು ಚಟ ಪಟ ಸದ್ದಿಗೆ
ಹಕ್ಕಿ ಚಿಲಿ ಪಿಲಿ ಗಾನ ಸೇರಿದರೆ
ಮತ್ತೇರದೆ ಮತ್ತೇನು ಮನ ಬೇರಗಾಗುವಷ್ಟಿದೆ
ಪರಿ-ಸರದ ಸ್ವರ ಮಾಧುರ್ಯದ ಸೊಬಗು

ಪಚ್ಚೆ ಪರ್ವತ ಸ್ವಚ್ಚೆ ಭೂ ತಾಯಿ
ನಲ್ಮೆಯ ನಾವಿಕನಂತೆ ಈ ನಂದನ ವನ
ಕರವ ಜೋಡಿಸಿ ಬಂಧಿಸುವ ತವಕ
ಒಮ್ಮೆ ಮುತ್ತಿಸುವ ಪುಳಕ
ನಂದನದ ಧರೆಯನು ಚಂದನದ ಗಿರಿಯನು

ಹಾವು ಹೂವು ಹುಳು ಹುಪ್ಪಟೆಯ ರಂಗು
ಚೆಲ್ಲಿ ಚೆದುರಿದ ಚದುರಂಗದ ಬದುಕು
ಮನಬಂದೆಡೆಗೆ ಹರಿಯುವ ಹಳಿ ನೀರು
ಸರ್ವ ಪರ್ವಗಳ ಚಿತ್ತಾರದ ಮೆಲುಕು

ಬುವಿಯ ಆಂತರ್ಯಕೆ ಭಾರವಲ್ಲ
ಕತ್ತು ಕುಯ್ಯುವರೆಂಬ ಭಯವಿಲ್ಲ
ಮದ ಮಚ್ಚರವಿಲ್ಲದೆ ಹಸಿದ ನಾಲಗೆಗೆ ಸಿಹಿಯು
ಒಂದು ಮರದ ಕೊಂಬೆಯಷ್ಟೆ ಸಾಕೆಂಬ ಜೇನು ಗೋಡು

ಆಗಸ ಪ್ರಥ್ವಿಗೆ ಸಮ್ಮಂದವೆಲ್ಲಿಂದ
ತಣ್ಣನೆಯ ತಂಪಿಗೆ ವರ ಮೋಡ ಬಾನಿಗೆ
ಕಾಮನ ಬಿಲ್ಲಿನ ಕಾಮನೆಯ ಸೋಗಿಗೆ
ಭುವಿಯ ಪಚ್ಚೆ ಸೊಬಗಿಗೆ ಕರಗಿ
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....
ಆ ಝರಿ ಮಳೆಯೇ ಬಾನಿಂದ
ಈ ಭುವಿಗೆ ಧನ್ಯವಾದ....




Wednesday, June 22, 2011

ತರಕಾರಿ ತಾರೆ.......



ಎನ್ನವಳು ಹಣ್ಣು ಹಂಪಲಿಗಿಂತ ಮಿಗಿಲಾದವಳು

ದುಂಡು ಮೊಗದ ತುಂಡು ಬದನೇ ಕಾಯಿ

ಬಾಳೇ ಹಣ್ಣಿನಂತೆ ಮಿಳ ಮಿಳಗಿನ ಮಿಂಚುಳ್ಳಿ

ನೇರಳೆಗೂ ನೆಂಟ ಸೌತೇ ಕಾಯಿ ಸೊಂಟ

ಹೀರೇ ಬಣ್ಣದ ಸೀರೆಯುಟ್ಟರೆ

ಮಂಡಕ್ಕಿ ಪಾಯಸವೂ ಬಿಸಿ ಆರುವುದು

ಕಪ್ಪು ದ್ರಾಕ್ಷಿಯ ಕಣ್ಣವಳು

ಬೆಂಡೇ ಕಾಯಿ ಕಾಲವಳು

ಜಿಲೇಬಿ ಸಿಹಿಯಂತ ತುಟಿಯವಳು

ಅವಳೇ ಎನ್ನ ಕಂಗಳು ಬಾಳ ಬೆಳದಿಂಗಳು

ನವಿಲು ಕೋಸಿನಂತೆ ನಲ್ಮೆಯ ಗೆಳತಿ

ಕೊತ್ತಂಬರಿ ಸೊಪ್ಪಿನಂತೆ ಸ್ವಾದದ ಸುಂದರಿ

ತರ ತರದ ತರಕಾರಿ ಎನ್ನವಳ ಉಸಬಾರಿ

ಕರಿಬೇವಿನಂತೆ ರುಚಿಗೆ ರಂಬೆಯೊ ಸಾಟಿಯಿಲ್ಲ

ಬೆಳ್ಳುಳ್ಳಿಯಂತೆ ಬೆಳ್ಳಗಿನ ಮನಸವಳು

ಸಾಸಿವೆಯಂತೆ ಪಟ ಪಟನೆ ಪುಟಿಯುವಳು

ಸಕ್ಕರೆಯ ಸಿಹಿಯವಳು ಅಕ್ಕರೆಯ ಗೆಳತಿ,



Thursday, June 9, 2011

ಹೆಣ್ಣು ಮನೆತನಕೆ ಹೊನ್ನು... ಹೆಣ್ಣು ಸಂಸಾರದ ಕಣ್ಣು,..

ಇದು ಸಂಸಾರದ ಗುಟ್ಟು.... ಯಾರಿಗೂ ಹೇಳ್ಬೇಡಿ...:-)

ಮಗನನ್ನು ಹೆತ್ತು ಹೊತ್ತು ಸಾಕಿ ಸಲಹಿ ವಿದ್ಯಾವಂತನನ್ನಾಗಿಸಿ ಅವನೂ ಮತ್ತೊಬ್ಬರಂತೆ ತನ್ನ ಕಾಲಲ್ಲಿ ತಾನು ನಿಲ್ಲಲು ಮೊದಲ ಪ್ರೇರಣೆಯೇ ತಾಯಿ, ಮಗನ ಪ್ರಗತಿಗಾಗಿ ಎಂತೆಂತ ನೋವು ಚುಚ್ಚು ಮಾತುಗಳನ್ನೂ ಸಹಿಸಿ ಹೊರಬಂದಿರುತ್ತಾಳೆ, ಆದರೆ ಅವೆಲ್ಲವೂ ನನ್ನ ಮಗ ಎಂಬ ಪ್ರೀತಿಯ ಗುಚ್ಚದಲ್ಲಿ ಮಾಸಿ ಹೋಗಿರುತ್ತದೆ ವಿನಹ ಎಂದಿಗೂ ಆ ನೋವು ಆಕೆಗೆ ಭಾರವೆನಿಸಿರುವುದಿಲ್ಲ, ಇದು ಆಕೆಯ ಜೀವನದ ಹಾದಿಯಲ್ಲಿ ಎಲ್ಲವನ್ನೂ ಸ್ವತಹ ಅನುಭವಿಸಿ ತಾಯಿ ಎಂಬ ಅಮೊಲ್ಯವಾದ ಪೀಠವನ್ನು ನಯವಾಗಿ ಪ್ರೀತಿಯಿಂದ ಸ್ವೀಕರಿಸಿ ಎಲ್ಲ ಕಷ್ಟವನ್ನೂ ಸಹಿಸಿ ಅದೆಷ್ಟೋ ಕನಸಿನ ಭಂಡಾರವನ್ನು ಹೊತ್ತು ಮಗನು ಒಂದು ಕೆಲಸ ಸಂಪಾದಿಸಿದಾಗ ಅದೇನೋ ಜೀವನದ ಒಂದು ಮೆಟ್ಟಿಲನ್ನು ಹತ್ತಿದ ತ್ರಪ್ತಿಯಿಂದ ಸಂತೋಷಪಡುತ್ತಾಳೆ. ಮಗನಿಗೆ ವ್ರತ್ತಿ ಅನ್ನೋದು ಏನೂ ದೊರೆತಾಯಿತು ಆದರೆ ಇನ್ನು ಒಂದು ಮದುವೆ ಅನ್ನೋದು ಆಗಿ ಹೋದರೆ ನನ್ನ ಕನಸಿನ ಜೀವನದ ಎಲ್ಲಾ ಹೆಜ್ಜೆಗಳನ್ನು ದಾಟಿದಂತೆ ಎಂದು ಹಾತೊರೆಯುತ್ತಾಳೆ, ಅಲ್ಲೂ ಹೆಣ್ಣು ನೋಡೋದು, ಹೆಣ್ಣಿನ ಆಯ್ಕೆ ಮಗನೀಗೆ ಇಷ್ಟವಾಗಿದೆಯೋ ಇಲ್ಲವೋ ಎಂಬ ಭೀತಿ, ಎಲ್ಲದರ ಜವಾಬ್ದಾರಿ ಹೊತ್ತು ಮುಂದುವರಿದಾಗ ಹೂವಿನಂತೆ ಸಾಕಿದ ಮಗನ ಬದುಕು ಮಡದಿ ಅನ್ನೋಳು ಬಂದ ಮೇಲೆ ಹೇಗಿರುತ್ತೋ ಅನ್ನೋ ದುಗುಡ ಎಲ್ಲವನನ್ನೂ ಸಹಿಸುವವಳು ತಾಯಿ. ಆದರೆ ತಾಯಿ ಆ ಸ್ಥಾನದಲ್ಲಿ ಇದ್ದು ಆಕೆಯ ಕೆಲಸಗಳನ್ನು ಸಂಪೂರ್ಣವಾಗಿ ಪ್ರೀತಿಯಿಂದ ಮುಗಿಸಿರುತ್ತಾಳೆ ಇನ್ನು ಆ ತಾಯಿಯ ಮನೆ ಎಂಬ ಅರಮನೆಯ ಸಂಪೂರ್ಣ ಜವಾಬ್ದಾರಿ ಸೊಸೆಗೆ.
ಮಗನ ಮದುವೆ ಮುಗಿದಾಯಿತು ನಗು ನಗುತ್ತಾ ಬಲಗಾಲಿಟ್ಟು ಸೊಸೆ ಒಳಗೆ ಬಂದಾಯಿತು ಇನ್ನು ದರ್ಬಾರೆಲ್ಲಾ ಸೊಸೇದೇ ನೋಡಿ.ಸೊಸೆ ಮನೆ ಬೆಳಗಿಸಬಹುದು ಮನೆ ಮುಳುಗಿಸಬಹುದು.
ನಿಜವಾಗಿಯು ಸೊಸೆ ಗಂಡನ ಮನೆಯಲ್ಲಿ ಸುಖವಾಗಿರಬೇಕು ಅಂದರೆ ಆಕೆಯಲ್ಲಿ ಜಾಣತನವಿರಬೇಕು. ಮೊದಲ ಕೆಲಸ ಗಂಡ ಹೇಗೆ ಅನ್ನೋದನ್ನ ತಿಳಿದುಕೊಳ್ಳುವುದು, ತಿಳಿಯಲು ಪ್ರಯತ್ನಿಸದಿದ್ದರೂ ಸರ್ವೇಸಾಮಾನ್ಯವಾಗಿ ತಿಳಿದೇ ತಿಳಿಯುತ್ತದೆ, ಹೆಂಡತಿಯ ಮುಂದೆ ಮನ ಬಿಚ್ಚದ ಗಂಡನಾರು ಅಲ್ಲವೇ. . ಗಂಡ ಅನ್ನುವವನಲ್ಲಿ ಎಷ್ಟೇ ಒಳ್ಳೆ ಗುಣ ಇದ್ದರೂ ಕೆಟ್ಟ ಗುಣಗಳನ್ನು ತಾಯಿ ತಿಳಿಯಲಿಲ್ಲವಾದರೂ ಮೊದಲು ರಿಸರ್ಚ್ ಮಾಡುವ ಪವರ್ ಮತ್ತು ಆಸಕ್ತಿ ಇರುವುದು ಹೆಂಡತಿಗೆ.
ಎಲ್ಲದರಲ್ಲೂ ಸ್ಟಾರ್ಟಿಂಗ್ ಟ್ರಬಲ್ ಅನ್ನೋದು ಇದ್ದೇ ಇರುತ್ತದೆ ಕ್ರಿಕೇಟ್ ಮ್ಯಾಚ್ ಆಗಿದ್ದರೆ ಮತ್ತೆ ಸರಿಪಡಿಸಿಕೊಳ್ಳಬಹುದು, ಆದರೆ ಇದು ಜೀವನ ಇಲ್ಲಿ ನಾಳೆ ಅನ್ನೋದು ಅನುಭವಿಸುವುದಕ್ಕೆ ಮಾತ್ರ ಇಂದು ಅನ್ನುವುದು ಸರಿಯಾಗಿ ರೂಪಿಸಿಕೊಳ್ಳುವುದಕ್ಕೆ. ಅತ್ತೆ ಸೊಸೆಯಿಂದ ಮೊದಲು ನಿರೀಕ್ಷಿಸುವುದು ನಯವಾದ ಮಾತು, ಉತ್ತಮ ನಡತೆ,ಗುಣ, ಆಕೆಯ ಆಡಂಭರವಿಲ್ಲದ ಸೌದರ್ಯ ಪ್ರಜ್ನೆ, ಮನೆಯವರೆಲ್ಲರನ್ನೂ ಪ್ರೀತಿಯಿಂದ ಓಲೈಸುವ ಮನೋಭಾವ.
ಮಗ ಪ್ರತೀ ದಿನದಂತೆ ಈ ದಿನವೂ ಆಫೀಸ್ ಗೆ ಹೋಗುವುದು ದಿನಚರಿ, ಹಾಗೆಯೇ ಅವನ ಅಮ್ಮ ಮಗ ಹೊರಡೋವಾಗ ಟಿಫನ್ ರೆಡಿ ಮಾಡೋದು ಹೊಸತೇನಲ್ಲ, ಆದರೆ ಸೊಸೆ ಬಂದಮೇಲೆ ಇದು ಬದಲಾಗಬೇಕು "ಅತ್ತೆ ನಾನಿದೀನಲ್ಲ ಇನ್ನೂ ನೀವ್ಯಾಕೆ ಇದನ್ನೆಲ್ಲ ಮಾಡ್ಬೇಕು" ಅನ್ನುವ ಸೊಸೆಯ ಪ್ರೀತಿ ತುಂಬಿದ ಒಂದು ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ರನ್ನಿನ ಕಾತೆ ತೆರೆದಂತೆ. ಅಲ್ಲಿ ಸೊಸೆಯ ಮುಂದೆ ಅತ್ತೆ ಏನೂ ಗೂಣಗದಿದ್ದರೂ ಮರೆಯಲ್ಲಿ ಸಂತಸ ತುಂಬಿದ ಎರಡು ಕಣ್ಣೀರನ್ನು ಸುರಿಸಿರುತ್ತಾಳೆ. ಮನೆ ಕೆಲಸಗಳಲ್ಲಿ ತಾನೂ ಪಾಲು ವಹಿಸಿ ಅತ್ತೆಗೆ ಸಾತ್ ನೀಡುವುದರಿಂದ ಆಕೆಯ ಮನದಲ್ಲಿ ಇನ್ನೂ ಹೆಚ್ಚಿನ ಜಾಗವನ್ನು ಪಡೆದುಕೊಳ್ಳಬಹುದು. ಇಲ್ಲಿ ಅತ್ತೆಯೊಬ್ಬಳ ಮನಗೆದ್ದರೆ ಮಾವನ ಮನವೂ ಗೆದ್ದಂತೆ ಹೇಗಂತೀರಾ ನೀವು ಅತ್ತೆಯ ಪರವಾಗಿ ವಹಿಸಿದ ಎಲ್ಲಾ ಕೆಲಸಗಳೂ ಸಂಜೆ ಮಾವನ ಗಮನಕ್ಕೆ ಚಾಚೂ ತಪ್ಪದೆ ಅಪ್ ಡೇಟ್ ಆಗಿರುತ್ತದೆ ಅಷ್ಟೇ ಅಲ್ಲದೆ ಅಲ್ಲಿ ನಡೆಯದ ಕೆಲವೂಂದು ವಿಷಯಗಳೂ ರೈಸ್ ಆಗಿದ್ದರೂ ಆಶ್ಚರ್ಯವೇನಿಲ್ಲ. ಸೊಸೆಯೊ ಕೆಲಸಕ್ಕೆ ಹೋಗಬೇಕೆಂದಿದ್ದರೆ ಮೊದಲು ಗಂಡನ ಅನುಮತಿ ನಂತರ ಅತ್ತೆ ಮಾವರ ಇಷ್ಟದ ಮೇರೆಗೆ ಹೋಗಬೇಕು. ಕೆಲಸಕ್ಕೆ ಹೋಗಿ ಬಂದು ಸುಸ್ತಾಗಿದೆ ಎಂದು ಸೋಫಾದಲ್ಲಿ ಟಿ ವಿ ರಿಮೋಟ್ ಹಿಡ್ಕೊಂಡು ಕೂತರೆ ಮತ್ತೆ ಕೆಲವೊಂದು ಪ್ರೀತಿ ತುಂಬಿದ ಅನುಮತಿಗಳೀಗೆ ಹರಸಾಹಸ ಪಡಬೇಕಾಗುತ್ತದೆ. ಸಂಜೆ ಕೆಲಸ ಮುಗಿದು ಬಂದು ಅತ್ತೆಗೆ ಸ್ವಲ್ಪ ಸಹಾಯ ಮಾಡಿ ನಂತರ ನಿಮ್ಮ ಕೆಲಸಗಳನ್ನು ಮಾಡಿಕೊಂಡರೆ ಮತ್ತೊಂದು ದಿನ ಸೊಸೆ ಕೆಲಸದಿಂದ ಬಂದಾಗ ಅತ್ತೆಯ ಬಿಸಿ ಬಿಸಿ ಟೀ ರೆಡಿಯಾಗಿರುತ್ತದೆ.
ಗಂಡನಾದವನೂ ಹೆಂಡತಿಯಿಂದ ಮೊದಲು ಬಯಸುವುದು ವ್ಯವಧಾನವಾದ ಮಾತು. ಗಂಡನ ಕೆಲವೂಂದು ನಿರ್ಧಾರಗಳೀಗೆ ಮಾತಿಗೆ ಮಾತು ಬೆಳೆಸಿ ರಂಪ ಮಾಡಿದರೆ ಅದೇ ಸಂಧರ್ಬ ಜೀವನದ ಯಾವುದೋ ಸುಖಕ್ಕೆ ಕಪ್ಪು ಚುಕ್ಕೆಯಾಗಿಬಿಡುತ್ತದೆ, ಆದರೆ ಆ ನಿರ್ಧಾರಕ್ಕೆ ಹೆಂಡತಿಯೊ ಕೆಲವೊಂದು ಅನ್ನಿಸಿಕೆಗಳನ್ನು ಸಮರ್ಪಿಸಬೇಕು ಆ ಸಮರ್ಪಣೆ ಆತನೀಗೆ ಜಾಣ್ಮೆಯಿಂದ ಅರ್ಥವಾಗುವ ರೀತಿಯಲ್ಲಿ ಪ್ರೀತಿಯಿಂದ ಪೌಣಿಸಿದಾಗ ಗಂಡನ ಪ್ರೀತಿ ತುಂಬಿದ ಒಂದು ಮುತ್ತು ಹೆಂಡತಿಯ ಕೆನ್ನೆಯನ್ನು ಅಲಂಕರಿಸುತ್ತದೆ. ಹೆಂಡತಿಯು ಗಂಡನನ್ನು ಗೌರವಿಸುವುದರಿಂದ ಆ ಗೌರವ ಭಾವನೆ ಸಂಬಂದಗಳ ಸುದೀರ್ಗ ಸಂತ್ರುಪ್ತಿಯನ್ನು ಕಲೆ ಹಾಕುತ್ತದೆ. ಆದರೆ ಹೆಂಡತಿ ಗಂಡನನ್ನು ಏಕೆ ಗೌರವಿಸಬೇಕು ಅನ್ನುವ ಭಾವನೆ ಅವಳಲ್ಲಿದ್ದರೆ ಅದು ಮೊರ್ಖತನ. ಗೌರವ ನಾವು ಸಂಪಾದಿಸಬೇಕು ಹೊರತು ನಮ್ಮನ್ನೇ ಗೌರವ ಗೌರವಿಸುತ್ತದೆ ಎಂದು ಕುಳಿತರೆ ತಲೆ ಕೂದಲು ಬಿಳಿಯಾಗುತ್ತದೆ ಅಷ್ಟೇ ಬಿಟ್ಟರೆ ಕತ್ತಲೆಯಲ್ಲಿ ಕಾಣುವುದುದೆಲ್ಲಾ ಮಂಜು ಆನ್ನುವುದನ್ನು ಪಾಲಿಸಿದಂತಾಗುತ್ತದೆ.. ಹೆಂಡತಿ ಗಂಡನನ್ನು ಗೌರವಿಸುವುದು ಅದು ಅವಳ ಜಾಣತನ ಮತ್ತು ಜವಾಬ್ದಾರಿ ನಂತರ ಗಂಡ ಹೆಂಡತಿಯನ್ನು ಗೌರವಿಸುವುದು ಆಕೆಯ ವಿವೇಚನೆಗೆ ಸಿಕ್ಕ ಪ್ರತಿಫಲ. ಅಷ್ಟೇ ಅಲ್ಲದೆ ಆತ ಹೆಂಡತಿಯ ಗೌರವಕ್ಕೆ ಪ್ರೀತಿಯಿಂದ ಮಣಿದು ಆಕೆಯನ್ನೊ ಗೌರವಿಸುತ್ತಾನೆ.

ಸೊಸೆಗೆ ಬದುಕಿನಲ್ಲಿನ ಮತ್ತೊಂದು ಶತ್ರು ಎಂದರೆ ಪಕ್ಕದ ಮನೆಯವರ ಮನೆಯೊಡೆಯುವ ಮಾತು, ಸಾಮಾನ್ಯವಾಗಿ ಪಕ್ಕದ ಮನೆಯ ದೇವಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು, ಅಲ್ಲದೆ ಅವರು ತುಂಬುವ ಕೆಲವೊಂದು ಆಸೆಗಳೀಗೆ ಕಿವಿಕೊಡಬಾರದು. ಮಾತು ಮಾತಿನಲ್ಲೇ ಇರಬೇಕು ಜೀವನದ ಕಷ್ಟಗಳನ್ನು ನೀವು ನಿಮ್ಮ ಅನುಭವಕ್ಕೆ ತಕ್ಕಂತೆ ನಿಭಾಯಿಸಬೇಕು ಹೊರತಾಗಿ ಮತ್ತೊಬ್ಬರೊಡಗಿನ ಚರ್ಚೆಯಿಂದಲ್ಲ. ಎಲ್ಲರ ಜೊತೆಗೂ ಬೆರೆಯುವುದು ಅದು ನಿಮ್ಮ ದೊಡ್ಡಗುಣ ಆದರೆ ಅವರೊಡನೆ ಬೆರೆಯುವ ವಿಚಾರ ನಿಮ್ಮ ಮನೆಯವರೀಗೆ ಸರಿ ಎನಿಸಿತ್ತೋ ಅಥವಾ ಬೇಸರ ತರಿಸಿತ್ತೋ ಅನ್ನುವುದನ್ನು ಜಾಣ್ಮೆಯಿಂದ ಪರಿಶೀಲಿಸಿ ಸಂಸ್ಕರಿಸಬೇಕು. ಮತ್ತು ಆ ದಿನದ ರುಚಿ ಅಥವಾ ಕಹಿ ಅನುಭವದ ಎಲ್ಲಾ ವಿಚಾರಗಳನ್ನು ಪಕ್ಕದ ಮನೆಯವರ ಜೊತೆ ಬಡಾಯಿಸುವುದರ ಬದಲು ಅತ್ತೆ ಮಾವ ಗಂಡನೊಡನೆ ವಿವರಿಸಿದಾಗ ನಿಮ್ಮ ಬಗ್ಗೆ ಎಲ್ಲರೀಗೂ ಉತ್ತಮ ಅಭಿಪ್ರಾಯ ಬರುವುದರಲ್ಲಿ ಸಂಶಯವೇ ಇಲ್ಲ. ಗಂಡ ಕೆಲಸದಿಂದ ಬಂದಾಗ, ಅತ್ತೆ ಮಾವರ ಮದ್ಯೆ ತೊಡಕಾದಾಗ ಎಲ್ಲಾ ನೋವುಗಳನ್ನು ಮರೆಸಿ ಸದಾ ನಗುನಗುತ್ತಾ ಓಡಾಡುವುದೇ ಮನೆಯ ಸೊಸೆಗೆ ಮನೆ ಬೆಳಗಿಸಲು ಇರುವ ಅತ್ಯಮೊಲ್ಯವಾದ ಸೂತ್ರ.. ತಾನು ಸೋತಿಲ್ಲ, ತಪ್ಪಿಲ್ಲವಾದರೂ ತನ್ನದೇ ತಪ್ಪು ಎಂದು ಒಪ್ಪಿಕೊಂಡ ನಂತರ ಆ ತಪ್ಪಿನ ನಿಜವಾದ ಮೊಲ ಅತ್ತೆಗೆ ತಿಳಿದಾಗ ನಿಮ್ಮ ಸೊಸೆ ಎಂಬ ಸ್ಥಾನ ಸೊಸೆ ಎಂಬ ದೇವತೆ ಎಂಬ ಮಾತಿನೆಡೆಗೆ ಸಾಗುವುದರಲ್ಲಿ ಸಂಶಯವೇ ಬೇಡ. ಅತ್ತೆ, ಮಾವ, ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿಚಾರಿಸುವುದು ಗಂಡನ ಜವಾಬ್ದಾರಿಗಳನ್ನು ಮೆಲುಕು ಹಾಕಿ ನಿಭಾಯಿಸುವುದು ಮನೆ,ಮನದ ಸೌಂದರ್ಯವನ್ನು ಇನ್ನೂ ಹೆಚ್ಚಿಸುತ್ತದೆ.

ಹೆಣ್ಣಿಗೆ ಗಂಡನಿಗಿಂತಲೂ ಹೆಚ್ಚಿನ ಮೋಹವಿರುವುದು ಚಿನ್ನಾಭರಣಗಳಲ್ಲಿ, ಅದನ್ನು ಗಂಡನ ಜೊತೆಗೆ ಜಗಳ ಮಾಡಿಕೊಂಡು ಮನೆಯ ಇತರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳದೆ ಎರ್ರಾ ಬಿರ್ರಿ ಗದ್ದಲ ಸ್ರುಷ್ಟಿಸಿ ತನ್ನ ಆಸೆಗಳನ್ನು ತೀರಿಸಿಕೊಳ್ಳುವುದರ ಬದಲು ಗಂಡನ ಅಥವಾ ಅತ್ತೆ ಮಾವರ ಜೊತೆಗೆ ಪ್ರೀತಿಯ ಮಾತುಗಳಿಂದ ತನ್ನ ಮನದ ಆಸೆಗಳನ್ನು ತೋಡಿಕೊಳ್ಳುವುದರಲ್ಲಿ ಹೆಚ್ಚಿನ ಸುಖವಿದೆ. ನೀವೇ ನಿಮಗೆ ಬೇಕಿರುವ ಚಿನ್ನವನ್ನು ಕೊಂಡು ಕೊಳ್ಳಲು ಮನೆಯವರಿಗೆಲ್ಲರಿಗೂ ತಿಳಿಯುವ ರೂಪದಲ್ಲಿ ಹಣವನ್ನು ಒಟ್ಟುಗೂಡಿಸಿಕೊಳ್ಳಿ, ನಿಮ್ಮ ಆಸೆ ಮತ್ತು ತೊಳಲಾಟವನ್ನು ನೋಡಿ ನಿಮ್ಮತ್ತೆ ಪ್ರೀತಿಯಿಂದ ನಕ್ಕು ಆಕೆ ಬೆಲ್ಲದ ಡಬ್ಬದಲ್ಲಿ ಅವಿತಿಟ್ಟ ಚಿಲ್ಲರೆ-ಪಲ್ಲರೆ ದುಡ್ಡನ್ನು ನಿಮ್ಮ ಮಡಿಲಿಗೆ ಸುರಿಯುತ್ತಾರೆ, ಆದರೆ ಅದರ ಹಿಂದೆ ಪ್ರೀತಿ ಇರುವುದಂತೂ ಕಂಡಿತಾ ಆ ಬಗ್ಗೆ ವಿಚಾರ ತಿಳಿದ ಬಳಿಕ ಮಾವನೂ ನನ್ನ ಮುದ್ದಿನ ಸೊಸೆಗೆ ಕೊಡುವುದರಲ್ಲಿ ನಾನೇನು ಕಡಿಮೆ ಎಂದು ಜಂಬಕ್ಕೆ ನಿಮಗೆ ಸಹಾಯ ಮಾಡಬಹುದು, ಇನ್ನು ಗಂಡ ಸುಮ್ಮನಿರುತ್ತಾನೆಯೇ ಅವನೂ ತನ್ನ ಕೈಯ್ಯಲ್ಲಾದಷ್ಟನ್ನು ಹೆಂಡತಿಯ ಇಚ್ಚೆಯನ್ನು ಪೂರೈಸುತ್ತಾನೆ. ಇದೀಗ ಚಿನ್ನ ನಿಮಗೆ ಪುಕ್ಕಟೆ ಸಿಕ್ಕಿದ್ದಲ್ಲ ನೀವು ಮನೆಯವರ ಮನ ಗೆದ್ದ ಸಾಧನೆಗೆ ಪ್ರಶಸ್ತಿ. ಅದೇ ಹಟ ಮಾಡಿಕೊಂಡು ಗಲಾಟೆ ಗದ್ದಲದಿಂದ ಗಳಿಸಿದ ಚಿನ್ನದಿಂದ ಈ ರೀತಿಯ ಸುಖವಿರುತ್ತಿತ್ತೇ....?

ಮನೆಗೆ ಮಗು ಬಂದ ಮೇಲೆ ಸೊಸೆಗೆ ಮನೆಯವರ ಮೇಲೆ ಪ್ರೀತಿ ಕಡಿಮೆಯಾಗಬಾರದು. ಎಲ್ಲಾ ಸಮಯದಲ್ಲೂ ಮಗುವನ್ನೇ ಮುದ್ದಿಸುತ್ತಾ ಕುಳಿತರೆ ಮತ್ತೆ ಎಲ್ಲೋ ಎಡವಿದ ಅನುಭವ ನಿಮ್ಮ ಗಮನಕ್ಕೆ ಬಾರದಿರುವುದಿಲ್ಲ. ಮಗುವನ್ನು ಅತ್ತೆ ಮಾವನಿಗೂ ಮುದ್ದಿಸಲು ಎಡೆಮಾಡಬೇಕು ಮತ್ತು ಪ್ರೋತ್ಸಾಹಿಸಬೇಕು. ಆ ಮಗು ಮನೆಯವರೆಲ್ಲರನ್ನೂ ಪ್ರೀತಿಸುವಂತೆ ಮಾಡಬೇಕು ಮಕ್ಕಳಾದಮೇಲೆ ಸ್ವಲ್ಪ ಮಟ್ಟಿಗೆ ಜವಾಬ್ದಾರಿ ಹೆಚ್ಚಿದರೂ ಗಂಡನ ಜೊತೆ ಈ ಹಿಂದೆ ಕಳೆದ ದಿನಗಳನ್ನು ಮರೆಯಬಾರದು ಪ್ರೀತಿ ಕಡಿಮೆಯಾಗಬಾರದು.
ಇಂದು ನೀವು ಸೊಸೆಯಾಗಿ ಮನೆಬೆಳಗಿಸಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ.

ಹೆಣ್ಣು ಮನೆತನಕೆ ಹೊನ್ನು... ಹೆಣ್ಣು ಸಂಸಾರದ ಕಣ್ಣು,..

Tuesday, June 7, 2011

ಮನ ಮಾಧುರ್ಯ ...


ಅಂದ ತುಳುಕುತಿಹುದು ಗಿಣಿಯು ಪಂಜರದೊಳೇಕೆ... ?
ಆಸೆ ಇಲ್ಲವೇ ಗಗನಕೆ ಹಾರಿ ಕುಣಿಯಲು.......!
ಅಂದ ಸೋರಿಹುದು ಕಾಗೆ ಗಗನವ ಬಾಚಿಹುದು
ಕಪ್ಪು ವರ್ಣವೇ ಕಾ ಕಾ ಹಾಡಿಗೆ ಸೌಂದರ್ಯದ ಹೊನಲು..!

ಸೋಲಿನ ಬದುಕು ಸಾಲು ಸಾಲಾಗಿ ಎಲ್ಲೆ ಮೀರಿದರೊ
ಒಂದು ಗೆಲುವಿನ ಏಣಿ ಏರಲು ಕಾಲಿಗೇಕೆ ದಣಿವಾಯಿತು....?
ಮನವು ಮುನಿದಾಗ ಕ್ಷಣದೊಳು ಹರಿದ ಕಣ್ಣೀರು
ಉಸಿರು ನಿಂತಾಗ ಏಕೆ ಬರಿದಾಯಿತು.......!

ಬಂದು ಬಳಗಗಗಳು ಮನೆತನದ ಕವಲುಗಳು
ಮಾತಿನ ಸೋಗೆಗೇಕೆ ಹರಿದು ಚೊರಾಗುವುದು.......?
ನಿನ್ನೆಗಳಲಿ ಪ್ರೀತಿ ಸ್ನೇಹ ಮಧುರ ಬಾಂದವ್ಯದೊಳು ನಗುವಿತ್ತು..!
ನಾಳೆಗಳ ನಾಲಗೆಯಲಿ ನಿನ್ನೆಗಳ ಮೆಲುಕುಗಳೇಕೆ ಶೊನ್ಯ.....?

ಜೋಕಾಲಿಯಂತೆ ಬದುಕು ತೊಗಿದರೆ ಮುಂದೆ ಹಿಂದೆ ಎರಡರ ಅರಿವು
ತೊಗಿದ ದಾರ ಕೊರಿದ ಆಸನ ಕೇವಲ ನೆಪವಷ್ಟೆ...!
ಅಂದು ಅಮ್ಮನ ತುತ್ತು...ಇಂದು ಹೆಂಡ ’ತಿ’ ಯ ಮುತ್ತು
ಪ್ರೀತಿ ಮರೆತು ಸುಕದ ಆಲಿಂಗನವಷ್ಟೆ....!
ಕಮಲಕೆ ನಗುವಿತ್ತು ಬೇರಿಗೆ ನೀರಿತ್ತು...
ಬೇರು ನೀರಿನ ರುಣಕೆ ಕಮಲಕೆ ಕಾಲವಿಲ್ಲ...!

ಸುಖ ಶಾಂತಿ ನೆಮ್ಮದಿ ಕಾಲಕ್ಕೆ ತಾಳಗಳು...
ಪ್ರೀತಿ ಸ್ನೇಹ ನಂಬಿಕೆ ಬದುಕಿನ ಮೌಲ್ಯಗಳು..
ಕಣ್ಣ ಕನಸು ಮನ ಮಾಧುರ್ಯ
ಗಾನದೊಳೇಕೆ ಮಧುರ... ಬಾಳಿನಲೇಕೆ ನಗ್ನ.....?

Thursday, June 2, 2011

ಹಿಜಡಾ ಎಂಬ ದುಗುಡ..


ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು,
ಇದು ಅವನು ಅವಳಾದ ಬದುಕು ಬಾಲ್ಯ ಹೀಗಿತ್ತು,
ಅವನ ಬಾಲ್ಯದಲ್ಲೊ ಕನಸುಗಳ ಸೌಂದರ್ಯದ ಸ್ವಾದ.

ಬದುಕೊಂದು ಪುಟ್ಟ ಸಾಲು, ಪುಟ್ಟ ಪುಟ್ಟ ಆಸೆಗಳ ಮೆಟ್ಟಿಲೇರಿ ಆಗಸವನ್ನೇ ಗಿಟ್ಟಿಸುವ ಬಯಕೆ, ಅವನೂ ಒಬ್ಬ ಪುಟ್ಟ ಕಂದಮ್ಮ ಎಲ್ಲರಂತೆಯೇ ಅವನಮ್ಮನೂ ಅಕ್ಕರೆಯಿಂದ ಓಲೈಸುತ್ತಿದ್ದಳಂತೆ, ಆಕೆಯ ಎದೆಹಾಲನ್ನು ಅವನೂ ಚುಂಬಿಸಿದ ಮಮತೆ, ಅವನಿಗೂ ಅವನಮ್ಮ ಗಲ್ಲದ ಮೇಲೆ ಕಾಡಿಗೆಯ ಬೊಟ್ಟು ಉಂಗುರಬೆರಳಿಂದ ಹಚ್ಚುತ್ತಿದ್ದ ನೆನಪು, ಎತ್ತಿ ಮುದ್ದಾಡಿದ್ದಳು, ನೆರೆಮನೆಯ ಪುಟಾಣಿಗಳೊಡನೆ ಚೆಂಡಾಟ ಆಡುತ್ತಿದ್ದ, ಹಠವಿತ್ತು ಅಳುತ್ತಿದ್ದ, ಅಮ್ಮ ಬುತ್ತಿ ಕಟ್ಟಿದ್ದಳು, ಅಪ್ಪ ಬೆನ್ನಿಗೆ ಬ್ಯಾಗ್ ಹಾಕಿ ಎತ್ತಿಕೊಂಡು ಸ್ಕೂಟರ್ ನಲ್ಲಿ ಕುಳ್ಳಿರಿಸಿ ಸೈಲೆಂಸರ್ ನ ಕಪ್ಪು ಹೊಗೆಯ ಜೊತೆಗೆ ಅವನ ಹಾಲು ಗಲ್ಲದ ತುಂಟಾಟ ಸಹಿಸಿಕೊಂಡು ಶಾಲೆಯ ಮುಂದಿನ ರಸ್ತೆಯಲ್ಲಿ ನಿಲ್ಲಿಸಿ ಟಾ ಟಾ ಮಾಡಿ ಹೋಗುತ್ತಿದ್ದರು, ಅವನಿಗೂ ಅಪ್ಪ ಅಮ್ಮ ಸಹೋದರ ಸಹೋದರಿ ಸ್ನೇಹಿತರು ಎಲ್ಲಾ ಇದ್ದರು.ಆದರೆ ಅವನ ಮನದಲ್ಲಿ ಇದೆಲ್ಲಾ ಮುಗಿದು ಹೋದ ಕಥೆಯಷ್ಟೆ.


ಹರೆಯ ಹಿರಿದಾಗುತ್ತಾ ಅವನಲ್ಲಿನ ಬದಲಾವನೆ ಕೊಂಚ ತಿಳಿದಿದ್ದರೊ ಏಳನೇ ತರಗತಿ ಮುಗಿದೊಡನೆ ಮನಸ್ಸು ಹಿಡಿತ ತಪ್ಪಿತ್ತು ಭಾವನೆಗಳಲ್ಲಿ ಏನೋ ವ್ಯತ್ಯಾಸ ಅವನೆಂಬ ಬದುಕು ಅವಳೆಂಬಂತೆ ಕಾಡುತ್ತಿತ್ತು, ಮನ ಒಂಟಿ ತನವನ್ನು ಬಯಸಿತ್ತು ಸತ್ಯವೇನೆಂಬುದು ಅದಾಗ ಆ ಮುಗ್ದ ಮನಸ್ಸಿಗೆ ಹೊಳೆಯಲೇ ಇಲ್ಲ, ತನ್ನ ತೊಳಳನ್ನು ಸ್ನೇಹಿತರೊಂದಿಗೆ ತೋಡಿಕೊಂಡ. ಈ ವರೆಗೂ ಆಟದ ಬಗ್ಗೆ ಆಡಿಕೊಂಡ ಸ್ನೇಹಿತರು ಇದೀಗ ಬದುಕಿನ ಬಗ್ಗೆಯೇ ಆಡಿಕೊಳ್ಳುವಂತಾಯಿತು, ಇದೇಕೆ ಬದುಕು ಹೀಗೆ? ನನಗೂ ಹೆಣ್ಣಾಗುವಾಸೆ, ಅವಳ ಜೊತೆ ಕೂರುವ ಆಸೆ,ಮುಡಿಗೆ ಮಲ್ಲಿಗೆ ಮುಡಿಯುವಾಸೆ,ಸೊಂಟ ಬಳುಕಿಸಿ ನಡೆದಾಡುವಾಸೆ ಆದರೆ ನಾಲ್ವರು ಹುಡುಗರೊಡನೆ ಕೊರುವಾಗ ಮನದಲ್ಲೊಂದು ತುಮುಲ ಎಲ್ಲದರ ಜೊತೆಗೆ ಬದುಕೇ ಗೊಂದಲದ ಅಲೆಯ ಜೊತೆ ಅಪ್ಪಳಿಸುತ್ತಿದೆ.

ಎಲ್ಲವನ್ನೊ ತಿಳಿದುಕೊಂಡು ಗಂಡಾಗಿ ಮುನ್ನಡೆಯುವ ಬಯಕೆ ದೂರಾಗಿ ಹೆಣ್ಣಾಗುವ ಬಯಕೆ ನೂರಾಯಿತು ಈ ನಿರ್ಧಾರದೊಡನೆ ಸಂಮ್ಮಂದಗಳೇ ದೂರಾಯಿತು. ಅಂದಿದ್ದ ಅಪ್ಪ ಅಮ್ಮನ ಪ್ರೀತಿ ಇಂದಿಲ್ಲ ಬೇನೆ ಹಂಚಿಕೊಳ್ಳಲು ಸೋದರಿ ಸೋದರರಿಲ್ಲ ಸ್ನೇಹಿತರಿಂದ ಕ್ಷಣ ಕ್ಷಣವೊ ಚುಚ್ಚು ಮಾತು, ಅವನು ಅವನಾಳವನ್ನು ಹಂಚಿಕೊಳ್ಳದಿದ್ದರೂ ವರ್ತನೆಯಿಂದಲೇ ಎಲ್ಲವೂ ಸ್ಪಷ್ಟವಾಗುತ್ತಿತ್ತು.

ಲಿಂಗ ಪರಿವರ್ತನೆಯಿಂದ ಹೆಣ್ಣಾಗಿ ಬದಲಾಗಲು ಆಪರೇಷನ್ ಮಾಡಿಸಿ ಕೊಳ್ಳುತ್ತಾರೆ ಆದರೆ ಚಿಕಿತ್ಸೆಯ ನಂತರ ಸ್ತನ ಮತ್ತು ಕೂದಲ ಬೆಳವಣಿಗೆಗಾಗಿ ವಿವಿದ ರೀತಿಯ ಹಾರ್ಮೋನುಗಳನ್ನು ದೀರ್ಘ ಕಾಲದವರೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅಂತಹ ಹಾರ್ಮೋನು ಚಿಕಿತ್ಸೆಯ ಸಂಧರ್ಬದಲ್ಲಿ ಮಾನಸಿಕ ಒತ್ತಡಗಳು ಸಹಜ ಅಲ್ಲಿ ಪರಿವರ್ತನೆಯಿಂದ ಬಯಕೆಗಳು ತೀರಿತಷ್ಟೆ ಬೇನೆ ಇನ್ನೂ ಹೆಚ್ಚಾಗಿತ್ತು. ಆತನೀಗೆ ಪ್ರಪಂಚದಲ್ಲಿ ನಾನೂಬ್ಬನೇ ಹೀಗೆ ನನಗೊಬ್ಬನೀಗೆ ಲಿಂಗ ಅಪವಾದ ಎಂಬ ತೊಳಲಿತ್ತು, ಅದೆಷ್ಟೋ ಬಾರಿ ಬದುಕೇ ಸಾಕು ಸತ್ತರೆ ಒಂದೇ ಬಾರಿ, ಬದುಕಿದ್ದರೆ ನೋವಿನೊಡನೆ ಚಿಂತೆಗಳ ಕಂತೆ ಅಷ್ಟೆ ಎಂದು ಸಾಯುವ ಸುಲಭ ದಾರಿಯನ್ನು ಹುಡುಕಲು ಹೋಗಿ ಎಡವಿದ್ದ ಮತ್ತೆ ಅಮ್ಮನ ಕೈ ತುತ್ತು ಸಿಗುವುದೋ ಎಂದು ಹೋದರೆ ಮನೆಯ ಬಾಗಿಲೇ ಮುಚ್ಚಿತ್ತು. ಆದರೆ ಅವರಲ್ಲೂ ಸಂಗವಿದೆ ಅವರಿಗೂ ಕನಸುಗಳನ್ನು ಕಟ್ಟುವ ದಾರಿಗಳಿವೆ ಎಂದು ಪ್ರತ್ಯಕ್ಷವಾಗಿ ತಿಳಿದಾಗ ಅವರ ಜೊತೆಗೇ ಸೇರಿಕೊಂಡ ಎಲ್ಲರಂತೇ ತಾನೂ ಕಣ್ಣಿಗೆ ಕಾಡಿಗೆ ತುಟಿಗೆ ಲಿಪ್ ಸ್ಟಿಕ್ ಕೆನ್ನೆಗಷ್ಟು ಪೌಡರ್ ಬಳಿದುಕೊಂಡು ಅಂಗಡಿ,ಸಿಗ್ನಲ್ ಗಳಲ್ಲಿ ಮತ್ತೊಬ್ಬರೆದುರು ಕೈ ಚಾಚುತ್ತಾ ಬದುಕಿನ ಚಕ್ರ ತಿರುಗುತ್ತಿತ್ತು ಆದರೆ ಒಂಟಿಯಾಗಿ ಕುಳಿತರೆ,ಕಣ್ಣು ಮುಚ್ಚಿದರೆ ಆ ಒಂದು ನೆನಪಿನ ಜೊತೆಗೆ ನೂರು ಕಂಬನಿಯ ಬಿಂದು ಕೆನ್ನೆಯ ಮೇಲೆ ಹರಿದಾಡುತ್ತಿತ್ತು.

ಯಾರದೋ ಮುಂದೆ ನಿಂತು ಹಣಕ್ಕೆ ಕೈ ಚಾಚಿದಾಗ ಅವರ ಕೈಯನ್ನೇ ಹಿಡಿದುಕೊಂಡು ತಮಾಶೆಯ ತಿಮಿರಿಗೆ ಕಾಮದ ಕಣ್ಣಿನಿಂದ ಅವರನ್ನು ಟೀಕಿಸುವುದುಂಟು, ಲಾಡ್ಜ್ ಗಳೀಗೆ ಕರೆತಂದು ಅವರಿಂದ ಎಣ್ಣೆ ಮಸಾಜು, ಸ್ವಲ್ಪ ಅಂದವಿದ್ದರೆ ಗೊಡ್ಡು ದೇಹದ ಸುಖವನ್ನು ಒತ್ತಾಯಪೂರ್ವಕವಾಗಿ ಅವರಿಂದಲೇ ತೀರಿಸಿಕೊಂಡು ರಾಜ ಗಾಂಭೀರ್ಯದಿಂದ ರೂಪಾಯಿಗಳನ್ನು ಮುಖಕ್ಕೆ ಚೆಲ್ಲುತ್ತಾರೆ ಎಂತಹಾ ಅಮಾನವೀಯ ಮನಸ್ಸು,
ಶೇಕಡಾ ೮೦ರಷ್ಟು ಮಂದಿ ನೊಂದುಕೊಂಡೇ ಬದುಕು ಸಾಕು ಅನ್ನೋದನ್ನ ನಿರ್ಧರಿಸುತ್ತಾರೆ, ಕೆಲವೊಬ್ಬರು ಮಂದಿ ಏನಂದರೂ ಪರವಾಗಿಲ್ಲ ಅವರ ಮಾತನ್ನು ಭೇದಿಸುತ್ತೇವೆ ಎಂಬ ದಿಟ್ಟ ನಿಲುವನ್ನು ಹೊಂದುತ್ತಾರೆ.

ಯಾಕೆ ಹಿಜಿಡಾ ಎಂದರೆ ಬದುಕಲು ಅನರ್ಹರೆನ್ನಬೇಕು ಅವರಲ್ಲೂ ಎಷ್ಟೋ ಮಂದಿ ದೇಶವನ್ನೇ ಹುರಿದುಂಬಿಸಿದ ಭರತನಾಟ್ಯ ಕಲಾವಿದರಿದ್ದಾರೆ, ಅವರಲ್ಲೂ ಕಲೆ ಇದೆ,ಅವರಿಗೂ ಸಂಸ್ಕ್ರುತಿ ಇದೆ, ಕಾನೂನು ಕಟ್ಟು ಕಟ್ಟಲೆಗಳಿವೆ ಜನಗಣತಿ ಜಾತಿಗಣತಿಗಳಲ್ಲಿ ಅವರಿಗೂ ಒಂದು ಸರಿಯಾದ ಸ್ಥಾನಮಾನ ನೀಡೋಣ,ಸರಕಾರೀ ನೌಕರಿಗಳನ್ನೂ ಹಂಚೋಣ ಅವರೂ ಕಾಮನ ಬಿಲ್ಲಿನ ಬಣ್ಣದ ಸೊಬಗನ್ನು ಸವಿಯುತ್ತಾರೆ, ಹೆಣ್ಣು ಗಂಡು ಎಂಬ ಮಾನವ ಜಾತಿಯಲ್ಲಿ ಅವರೂ ಒಬ್ಬರು, ಸುಂದರ ಬದುಕಿನಲ್ಲಿ ನೋವಿನ ಸುಳಿಯೊಳಗೆ ಅವರ ಕಣ್ಣೀರೇಕೆ ಕೆನ್ನೆಯಿಂದ ಹರಿದು ನೆಲವನ್ನು ಸೋಕುವುದು.......................?